newsics.com
ಮೈಸೂರು: ಮುಡಾ ನಿವೇಶನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಬುಧವಾರ ಲೋಕಾಯುಕ್ತ ವಿಚಾರಣೆಗೆ ಹಾಜರಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿನ ಲೋಕಾಯುಕ್ತ ಎಸ್‌ಪಿ ಕಚೇರಿಗೆ ಖಾಸಗಿ ಕಾರಿನಲ್ಲೇ ವಿಚಾರಣೆಗೆ ಹಾಜರಾಗಿದ್ದಾರೆ. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಖಾಸಗಿ ಕಾರಿನಲ್ಲೇ ಲೋಕಾಯುಕ್ತ ಕಚೇರಿಗೆ ಬಂದು ವಿಚಾರಣೆಗೆ ಹಾಜರಾದರು.
ಬುಧವಾರ ಬೆಳಗ್ಗೆ 10.10ಕ್ಕೆ ಅವರು ವಿಚಾರಣೆಗೆ ಬಂದಿದ್ದು, ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ನೇತೃತ್ವದ ತಂಡವು ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ಸಿಎಂ ವಿಚಾರಣೆ ಹಿನ್ನೆಲೆಯಲ್ಲಿ ಕಚೇರಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮುಡಾದಿಂದ 50:50 ಅನುಪಾತದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು 14 ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹೈಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಪತ್ನಿಗೆ ನಿವೇಶನ ಕೊಡಿಸಿದ ಆರೋಪ ಅವರ ಮೇಲಿದೆ.
ಪ್ರಕರಣದ ಇತರ ಆರೋಪಿಗಳಾದ ಬಿ.ಎಂ. ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ಅವರ ವಿಚಾರಣೆಯು ಈಗಾಗಲೇ ಪೂರ್ಣಗೊಂಡಿದ್ದು, ಹೈಕೋರ್ಟ್‌ಗೆ ಮೂರು ತಿಂಗಳ ಒಳಗೆ ವರದಿ ಸಲ್ಲಿಸಬೇಕಿದೆ.
ಸಚಿವ ಜಮೀರ್‌ಗೆ ಸಂಕಷ್ಟ: ಎಐಸಿಸಿಗೆ ಕಾಂಗ್ರೆಸ್ ಶಾಸಕರಿಂದಲೇ ದೂರು, ಅಸಮಾಧಾನ