newsics.com
ಬೆಂಗಳೂರು : ಬಿಎಸ್‌ಎನ್‌ಎಲ್ ತನ್ನ ಹೊಸ ‘ಸರ್ವತ್ರ’ ಯೋಜನೆಯ ಮೂಲಕ ಗ್ರಾಹಕರಿಗೆ ಮನೆಯಿಂದ ದೂರವಿದ್ದರೂ ಮನೆಯ ಫೈಬರ್ ಕನೆಕ್ಷನ್ ಬಳಸಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ.
ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಬರ್ಟ್ ಜೆ, ರವಿ ಅವರು ‘ಸರ್ವತ್ರ’ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
ದೇಶದ ಎಲ್ಲಾ ಗ್ರಾಮಗಳಿಗೆ ಹೈ-ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಒದಗಿಸೋದು ಸರ್ವತ್ರ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ಬಳಕೆದಾರರು ಮೊಬೈಲ್ ಡೇಟಾಗಾಗಿ ಖರ್ಚು ಮಾಡುವ ಹಣ ಉಳಿತಾಯವಾಗಲಿದೆ.
ಈ ಯೋಜನೆಯಿಂದ ಮನೆ ಅಥವಾ ಆಫಿಸ್ ಅಥವಾ ಇನ್ಯಾವುದೇ ಪ್ರದೇಶದಲ್ಲಿದ್ದರೂ FTTH ಕನೆಕ್ಷನ್ ಮೂಲಕ ಮೂಲಕ ವೈಫೈ ಬಳಕೆ ಮಾಡಬಹುದು. ಮನೆಯ ಹೊರಗೆ ನೀವು ಬಿಎಸ್ಎನ್ಎಲ್ ನ ಎಫ್‌ಟಿಟಿಎಚ್ ಕನೆಕ್ಷನ್ ಮೂಲಕ ಸರ್ವತ್ರ ಯೋಜನೆಯಡಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸಬಹುದು. ಸರ್ವತ್ರ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಬಳಕೆದಾರರಿಗೆ ಮಾತ್ರ ಇದರ ಸಂಪೂರ್ಣ ಲಾಭ ಸಿಗಲಿದೆ.
ಬೇರೆ ಸ್ಥಳದಲ್ಲಿ ಮನೆಯ ವೈಫೈ ಬಳಸುವಾಗ ಯೂಸರ್ ಐಟಿ ಮತ್ತು ಪಾಸ್‌ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಸರ್ವತ್ರ ಪೋರ್ಟಲ್ ವರ್ಚುವಲ್ ಟವರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಬಿಎಸ್‌ಎನ್‌ಎಲ್ ಭರವಸೆ ನೀಡುತ್ತದೆ. ನಿಖರವಾದ ಸೇವೆಯನ್ನು ಖಚಿತಪಡಿಸಿಕೊಳ್ಳಲು ‘ಒನ್ ನಾಕ್’ ವ್ಯವಸ್ಥೆಯು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.